ಮಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಆಯೋಗದ ವೆಬ್ಸೈಟ್ನಲ್ಲಿ ಅಂತಿಮ ಮತದಾರರ ಪಟ್ಟಿ ಲಭ್ಯವಾಗಿದೆ.

SIR ಪ್ರಕ್ರಿಯೆಗೂ ಮುನ್ನ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದರು. ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತದಾರರ ಸಂಖ್ಯೆ 4.55 ಕೋಟಿಗೆ ಇಳಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 99.32 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಬಳಿಕ ಮತದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದು ಗಮನ ಸೆಳೆದಿದೆ. ಮತದಾರರ ಹೆಸರುಗಳ ಸೇರ್ಪಡೆ, ತಿದ್ದುಪಡಿ ಮತ್ತು ಕೈಬಿಡುವ ಪ್ರಕ್ರಿಯೆಯ ವಿವರಗಳು ಅಂತಿಮ ಪಟ್ಟಿಯಲ್ಲಿ ಲಭ್ಯವಾಗಲಿವೆ. ಮತದಾರರು ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಿಕೊಳ್ಳಬಹುದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9,064 ಮತದಾರರ ಹೆಸರು ಡಿಲೀಟ್!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 9,064 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಮರಣ ಹೊಂದಿದವರು ಸೇರಿದಂತೆ ವಿವಿಧ ಕಾರಣಗಳಿಂದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪೈಕಿ 7,627 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, 87 ಮಂದಿ ಮರಣ ಹೊಂದಿದ್ದಾರೆ ಎಂದು ನೀಡಿರುವ ಅಂಕಿಅಂಶಗಳು ತಿಳಿಸಿವೆ. 2026ರ ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16,46,387 ಮತದಾರರ ಹೆಸರುಗಳಿದ್ದವು. ಬಳಿಕ 41,125 ಹೊಸ ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು. ಅಂತಿಮ ಪರಿಷ್ಕರಣೆಯಲ್ಲಿ 9,064 ಹೆಸರುಗಳನ್ನು ಕೈಬಿಡಲಾಗಿದ್ದು, ಅಂತಿಮವಾಗಿ ಜಿಲ್ಲೆಯಲ್ಲಿ 16,78,448 ಮತದಾರರ ಹೆಸರುಗಳನ್ನು ಪ್ರಕಟಿಸಲಾಗಿದೆ. ಅಂತಿಮ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 8,23,198 ಪುರುಷರು ಹಾಗೂ 8,55,232 ಮಹಿಳೆಯರು ಮತದಾರರಾಗಿದ್ದಾರೆ.
ಯಾವ ಕ್ಷೇತ್ರದಲ್ಲಿ ಎಷ್ಟು ಹೆಸರು ಡಿಲೀಟ್?
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕೈಬಿಡಲಾದ ಮತದಾರರ ಹೆಸರುಗಳ ವಿವರ ಹೀಗಿದೆ:
- ಬೆಳ್ತಂಗಡಿ: 1,376
- ಮೂಡುಬಿದಿರೆ: 812
- ಮಂಗಳೂರು ಉತ್ತರ: 1,386
- ಮಂಗಳೂರು ದಕ್ಷಿಣ: 1,529
- ಮಂಗಳೂರು: 1,010
- ಬಂಟ್ವಾಳ: 893
- ಪುತ್ತೂರು: 1,038
- ಸುಳ್ಯ: 1,020
ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 9,064 ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ.
1.50 ಲಕ್ಷ ಮಂದಿಗೆ ನೋಟಿಸ್
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,50,131 ಮಂದಿಗೆ ನೋಟಿಸ್ ನೀಡಲಾಗಿತ್ತು. ಈ ಪೈಕಿ 1,392 ಮಂದಿಯನ್ನು ಅನರ್ಹರೆಂದು ಘೋಷಿಸಲಾಗಿದೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
