ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಅವರ ತಾಯಿ ಕುಸುಮಾವತಿ ಅವರ ರಕ್ತದ ಮಾದರಿಯನ್ನು ಬೆಳ್ತಂಗಡಿ ನ್ಯಾಯಾಲಯದಲ್ಲಿ ಸಂಗ್ರಹಿಸಲಾಗಿದೆ.

ಕುಸುಮಾವತಿ ಅವರು ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ಎಸ್‌ಐಟಿ ತಂಡ ರಕ್ತದ ಮಾದರಿ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖಾಧಿಕಾರಿ ಲೋಕೇಶ್ ಜಗಲ್ಸಾರ್ ಹಾಗೂ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದ ಎಸ್‌ಐಟಿ ತಂಡ ನ್ಯಾಯಾಲಯಕ್ಕೆ ಆಗಮಿಸಿತ್ತು. ಇದೇ ವೇಳೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯೂ ನ್ಯಾಯಾಲಯಕ್ಕೆ ಬಂದಿದ್ದು, ರಕ್ತದ ಮಾದರಿ ಸಂಗ್ರಹಕ್ಕೆ ಅಗತ್ಯವಾದ ಕಿಟ್‌ಗಳನ್ನು ತಂದಿದ್ದರು. ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆ ಸೇರಿದಂತೆ ವಿಧಿವಿಜ್ಞಾನ ಪರೀಕ್ಷೆಗಳಿಗಾಗಿ ಸಂಗ್ರಹಿಸಲಾಗಿದೆಯೇ ಎಂಬ ಬಗ್ಗೆ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆದಿರುವ ಈ ಪ್ರಕ್ರಿಯೆ ಮಹತ್ವ ಪಡೆದುಕೊಂಡಿದ್ದು, ರಕ್ತದ ಮಾದರಿ ಸಂಗ್ರಹದ ಉದ್ದೇಶ ಮತ್ತು ಮುಂದಿನ ತನಿಖಾ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
