Home ಉದ್ಯೋಗ‘ನಾನು ಮಾಡಿದ ತಪ್ಪಿಗೆ ಆತ್ಮಹತ್ಯೆ’: ನೈತಿಕ ಪೊಲೀಸ್‌ಗಿರಿ ಆರೋಪದ ಬೆನ್ನಲ್ಲೇ ವ್ಯಕ್ತಿ ಆತ್ಮಹತ್ಯೆ!

‘ನಾನು ಮಾಡಿದ ತಪ್ಪಿಗೆ ಆತ್ಮಹತ್ಯೆ’: ನೈತಿಕ ಪೊಲೀಸ್‌ಗಿರಿ ಆರೋಪದ ಬೆನ್ನಲ್ಲೇ ವ್ಯಕ್ತಿ ಆತ್ಮಹತ್ಯೆ!

by diksoochikannada.com

ಮಂಗಳೂರು: ನೈತಿಕ ಪೊಲೀಸ್‌ಗಿರಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಹೊಸಬೆಟ್ಟುವಿನಲ್ಲಿ ನಡೆದಿದೆ.

ಹೊಸಬೆಟ್ಟು ನಿವಾಸಿ ಸೋಮನಾಥ್ ಪುತ್ರನ್ (48) ಆತ್ಮಹತ್ಯೆ ಮಾಡಿಕೊಂಡವರು. ಅಕ್ಟೋಬರ್ 25ರ ರಾತ್ರಿ ಹೊಸಬೆಟ್ಟು ಬೀಚ್‌ ಬಳಿ ದಂಪತಿಯನ್ನು ಪ್ರಶ್ನಿಸಿ, ಸ್ನೇಹಿತರೊಂದಿಗೆ ಸೇರಿ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪ ಸೋಮನಾಥ್ ಹಾಗೂ ಇತರರ ಮೇಲಿತ್ತು. ಅಮಲು ಪದಾರ್ಥ ಸೇವಿಸಿ ಯುವತಿಗೆ ಅವಾಚ್ಯವಾಗಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ದಂಪತಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸುರತ್ಕಲ್ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಿ ಕಳುಹಿಸಿದ್ದರು ಎನ್ನಲಾಗಿದೆ. ಈ ಘಟನೆಯಿಂದ ಮನನೊಂದು ಸೋಮನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಬಾವ ನೀಲಾಧರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೋಮನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ, “ನನ್ನ ಸಾವಿಗೆ ನಾನೇ ಕಾರಣ. ನಾನು ಮಾಡಿದ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ನಾನೇ ಕಾರಣ” ಎಂದು ಬರೆದಿರುವುದಾಗಿ ತಿಳಿದುಬಂದಿದೆ. ಸೋಮನಾಥ್ ಅವರಿಗೆ ಕುಡಿತದ ಚಟವಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆಯೇ ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಅವರು, ಪತ್ನಿ ಮತ್ತು ಮಗನೊಂದಿಗೆ ವಾಸಿಸುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿ ಒಬ್ಬಂಟಿಯಾಗಿಯೇ ಇರುತ್ತಿದ್ದರು ಎನ್ನಲಾಗಿದೆ. ಸೋಮನಾಥ್ ಅವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ನೀಲಾಧರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈತನಿಗೆ ಪ್ರಕರಣದಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು: ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ವರದಿಯಾಗಿದೆ. ನಿನ್ನೆ ಬೀಚ್‌ಗೆ ಬಂದಿದ್ದ ದಂಪತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಈತನ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿದ್ದರಿಂದ ಈತನಿಗೆ ಪ್ರಕರಣದಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು. ಇದರಿಂದ ಮನನೊಂದಿದ್ದ ಎನ್ನಲಾದ ಈತ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

You may also like

Leave a Reply