Home ಉದ್ಯೋಗಸುರತ್ಕಲ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ: ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆಯಲ್ಲಿ ಧರಣಿ ಅಂತ್ಯ!

ಸುರತ್ಕಲ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ: ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆಯಲ್ಲಿ ಧರಣಿ ಅಂತ್ಯ!

by diksoochikannada.com

ಮಂಗಳೂರು: ನೈತಿಕ ಪೊಲೀಸ್‌ಗಿರಿ ಆರೋಪದಡಿ ಪ್ರಕರಣ ದಾಖಲಾಗಿದ್ದ ಹೊಸಬೆಟ್ಟು ನಿವಾಸಿ ಸೋಮನಾಥ (48) ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರ ವಿರುದ್ಧ ದೌರ್ಜನ್ಯದ ಆರೋಪ ಹೊರಿಸಿ ಸುರತ್ಕಲ್ ಪೊಲೀಸ್ ಠಾಣೆ ಎದುರು ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆ ಶಾಸಕ ಭರತ್ ಶೆಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ಅಂತ್ಯಗೊಂಡಿದೆ.

ಮೃತ ಸೋಮನಾಥ ಅವರ ಮೃತದೇಹವನ್ನು ಠಾಣೆಯ ಎದುರು ಇರಿಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಜೋಡಿ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯ ವೇಳೆ ರಸ್ತೆ ತಡೆದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೀಚ್‌ನಲ್ಲಿ ಜೋಡಿಯನ್ನು ಪ್ರಶ್ನಿಸಿದ ಆರೋಪ!

ಅಕ್ಟೋಬರ್ 25ರ ರಾತ್ರಿ ಹೊಸಬೆಟ್ಟು ಬೀಚ್‌ ಬಳಿ ಜೋಡಿಯನ್ನು ಪ್ರಶ್ನಿಸಿ, ಸ್ನೇಹಿತರೊಂದಿಗೆ ಸೇರಿ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪ ಸೋಮನಾಥ ಮತ್ತು ಇತರರ ಮೇಲಿತ್ತು. ಅಮಲು ಪದಾರ್ಥ ಸೇವಿಸಿ ಯುವತಿಗೆ ಅವಾಚ್ಯವಾಗಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಜೋಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ನೋಟಿಸ್ ನೀಡಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಮನೆಯಲ್ಲಿ ನೇಣು ಬಿಗಿದುಕೊಂಡ ಸೋಮನಾಥ!

ಅಕ್ಟೋಬರ್ 27ರಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೋಮನಾಥ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ನನ್ನ ಸಾವಿಗೆ ನಾನೇ ಕಾರಣ. ನಾನು ಮಾಡಿದ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬ ಅರ್ಥದ ಡೆತ್‌ನೋಟ್ ಬರೆದಿಟ್ಟಿದ್ದರು ಎನ್ನಲಾಗಿದೆ. ಸೋಮನಾಥ ಅವರ ಬಾವ ನೀಲಾಧರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಸೋಮನಾಥ ಅವರಿಗೆ ಕುಡಿತದ ಚಟವಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೋಡಿಗೆ ಅವಾಚ್ಯವಾಗಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನೀಲಾಧರ್ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೋಮನಾಥ ಈ ಹಿಂದೆ ಗೋವಾದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಮತ್ತು ಮಗ ಅವರೊಂದಿಗೆ ವಾಸವಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಪೊಲೀಸರ ವಿರುದ್ಧ ಶಾಸಕ ಭರತ್ ಶೆಟ್ಟಿ ಆಕ್ರೋಶ!

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೀಚ್‌ಗಳಲ್ಲಿ ತಡರಾತ್ರಿಯವರೆಗೂ ಕೆಲವರು ಬಂದು ತಿರುಗಾಡುತ್ತಾರೆ. ಅಲ್ಲಿ ಮೀನುಗಾರರು ಅವರನ್ನು ಪ್ರಶ್ನಿಸುತ್ತಾರೆ. ಕೆಲವರು ಮಾದಕ ವಸ್ತುಗಳನ್ನು ಸೇವಿಸಿ ಸ್ಥಳೀಯರಿಗೆ ತೊಂದರೆ ನೀಡುವ ಘಟನೆಗಳೂ ನಡೆಯುತ್ತವೆ. ಇಂತಹ ಸಮಸ್ಯೆಗಳನ್ನು ತಡೆಯಲು ಬೀಚ್‌ಗಳಲ್ಲಿ ಬೀಟ್ ಪೊಲೀಸ್ ವ್ಯವಸ್ಥೆ ಮತ್ತು ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಯಾರಾದರೂ ದೂರು ನೀಡಿದರೆ ಎರಡೂ ಕಡೆಯವರ ದೂರುಗಳನ್ನು ಸ್ವೀಕರಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಿದರು. ಪೊಲೀಸರ ಕ್ರಮದಿಂದ ಸೋಮನಾಥ ಅವರಿಗೆ ಅವಮಾನವಾಗಿದ್ದು, ಅವರ ವಿಡಿಯೋ ಮಾಡಿ ಅವಮಾನಿಸಲಾಗಿದೆ ಎಂದು ಆರೋಪಿಸಿದ ಶಾಸಕ ಭರತ್ ಶೆಟ್ಟಿ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಜೋಡಿ ವಿರುದ್ಧ ಎಫ್‌ಐಆರ್‌ಗೆ ಒತ್ತಾಯ

ನೈತಿಕ ಪೊಲೀಸ್‌ಗಿರಿ ಆರೋಪದಡಿ ದೂರು ನೀಡಿದ್ದ ಜೋಡಿ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕು ಎಂದು ಗ್ರಾಮಸ್ಥರು ಪ್ರತಿಭಟನೆಯ ವೇಳೆ ಒತ್ತಾಯಿಸಿದರು. ಈ ಸಂಬಂಧ ಠಾಣೆಗೆ ಲಿಖಿತ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದು, ದೂರು ಸ್ವೀಕರಿಸಿದ ಬಳಿಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ. ಶಾಸಕ ಭರತ್ ಶೆಟ್ಟಿ ಅವರ ಮಧ್ಯಸ್ಥಿಕೆ ಹಾಗೂ ಪೊಲೀಸರ ಭರವಸೆಯ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಬಳಿಕ ಠಾಣೆಯ ಮುಂಭಾಗದಿಂದ ಮೃತದೇಹವನ್ನು ತೆಗೆದುಕೊಂಡು ಹೋದರು.

You may also like

Leave a Reply