Home ಕರಾವಳಿಮಂಗಳೂರು: ಆಸ್ತಿಗಾಗಿ ತಂದೆಯನ್ನೇ ಕೊಂದ ಆರೋಪ: ಎರಡು ತಿಂಗಳ ಬಳಿಕ ಶವ ಹೊರಕ್ಕೆ!

ಮಂಗಳೂರು: ಆಸ್ತಿಗಾಗಿ ತಂದೆಯನ್ನೇ ಕೊಂದ ಆರೋಪ: ಎರಡು ತಿಂಗಳ ಬಳಿಕ ಶವ ಹೊರಕ್ಕೆ!

by diksoochikannada.com

ಮಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯನ್ನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಎರಡು ತಿಂಗಳ ಹಿಂದೆ ದಫನ ಮಾಡಲಾಗಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದು ತನಿಖೆ ಆರಂಭಿಸಿದ್ದಾರೆ.

ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಜುಲೈ 19ರಂದು ಮೃತಪಟ್ಟಿದ್ದರು. ಬಳಿಕ ಅವರ ಮೃತದೇಹವನ್ನು ದೇರೆಬೈಲ್ ಚರ್ಚ್‌ನ ದಫನ ಭೂಮಿಯಲ್ಲಿ ಹೂಳಲಾಗಿತ್ತು. ಆದರೆ ತಂದೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರ ಸ್ನೇಹಿತರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮಗಳ ವಿರುದ್ಧ ಗಂಭೀರ ಆರೋಪ!

ಮೃತ ಆಲ್ಬರ್ಟ್ ರೇಗೋ ಅವರ ಮಗಳು ಮಾಯಾ ರೇಗೋ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ತಂದೆ ಮೃತಪಟ್ಟ ವಿಚಾರವನ್ನು ಸಂಬಂಧಿಕರು ಹಾಗೂ ಸ್ಥಳೀಯರಿಗೆ ತಿಳಿಸದೆ ದಫನ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಸಾವಿಗೂ ಮುನ್ನ ತಂದೆಯಿಂದ ಒತ್ತಾಯಪೂರ್ವಕವಾಗಿ ವಿಲ್ ಬರೆಸಿಕೊಳ್ಳಲಾಗಿತ್ತು ಹಾಗೂ ಬಾಯ್‌ಫ್ರೆಂಡ್ ಜೊತೆ ಸೇರಿ ತಂದೆಯನ್ನು ಕೊಲೆ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. ಮಾತ್ರೆ ನೀಡಿ ಸಾಯಿಸಿರಬಹುದು ಎಂಬ ಅನುಮಾನವನ್ನು ಕೂಡ ದೂರುದಾರರು ವ್ಯಕ್ತಪಡಿಸಿದ್ದಾರೆ. ಈ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಮಾಯಾ ರೇಗೋ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೋಟಿ ಮೌಲ್ಯದ ಆಸ್ತಿ ಹಿನ್ನೆಲೆ?

ಆಲ್ಬರ್ಟ್ ರೇಗೋ ಅವರಿಗೆ ನಾಲ್ವರು ಮಕ್ಕಳಿದ್ದು, ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ಆಸ್ತಿ ಸಂಪಾದಿಸಿದ್ದರು ಎನ್ನಲಾಗಿದೆ. ಅವರ ಇಬ್ಬರು ಮಕ್ಕಳು ಸದ್ಯ ದುಬೈನಲ್ಲಿ ನೆಲೆಸಿದ್ದು, ಆಲ್ಬರ್ಟ್ ರೇಗೋ ಮಗಳೊಂದಿಗೆ ವಾಸಿಸುತ್ತಿದ್ದರು. ಕೋಟಿ ರೂಪಾಯಿ ಮೌಲ್ಯದ ಆಸ್ತಿಯೇ ಸಾವಿನ ಹಿಂದಿನ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದೆ. ಪ್ರಕರಣವನ್ನು ಮುಚ್ಚಿಹಾಕಲು ಕೆಲ ಪೊಲೀಸರೊಂದಿಗೆ ಸೇರಿ ಪ್ರಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪಗಳ ಬಗ್ಗೆ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ. ಆಲ್ಬರ್ಟ್ ರೇಗೋ ಅವರ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಮರುತನಿಖೆಗೆ ಮುಂದಾಗಿದ್ದಾರೆ. ಅದರ ಭಾಗವಾಗಿ ಮಂಗಳೂರಿನ ದೇರೆಬೈಲ್ ಚರ್ಚ್‌ನ ದಫನ ಭೂಮಿಯಲ್ಲಿ ಹೂಳಲಾಗಿದ್ದ ಮೃತದೇಹವನ್ನು ಹೊರತೆಗೆಯುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಂಗಳೂರು ತಹಶೀಲ್ದಾರ್ ಸಮ್ಮುಖದಲ್ಲಿ ಉರ್ವಾ ಪೊಲೀಸರು ಹಾಗೂ ಫಾರೆನ್ಸಿಕ್ ತಂಡದ ಉಪಸ್ಥಿತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಪರೀಕ್ಷೆಗೆ ಕಳುಹಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

You may also like

Leave a Reply