Home ಉದ್ಯೋಗಹಿರಿಯ ನ್ಯಾಯವಾದಿ ಅರುಣ್ ಶ್ಯಾಂ ಪ್ರಯತ್ನಕ್ಕೆ ಫಲ: ಪುತ್ತೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ರೈಲ್ವೆ ಮಂಡಳಿ ಅಸ್ತು!

ಹಿರಿಯ ನ್ಯಾಯವಾದಿ ಅರುಣ್ ಶ್ಯಾಂ ಪ್ರಯತ್ನಕ್ಕೆ ಫಲ: ಪುತ್ತೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ರೈಲ್ವೆ ಮಂಡಳಿ ಅಸ್ತು!

by diksoochikannada.com

ಪುತ್ತೂರು: ಹಿರಿಯ ನ್ಯಾಯವಾದಿ ಅರುಣ್ ಶ್ಯಾಂ ಎಂ. ಅವರ ನಿರಂತರ ಪ್ರಯತ್ನ ಹಾಗೂ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿದ ಮನವಿಗೆ ಫಲ ದೊರೆತಿದ್ದು, ಮಂಗಳೂರು ಮಾರ್ಗವಾಗಿ ಸಂಚರಿಸುವ ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಬಕ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಪುತ್ತೂರು ಹಾಗೂ ಸುತ್ತಮುತ್ತಲಿನ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಂದೇ ಭಾರತ್ ರೈಲಿಗೆ ಕಬಕ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಹಿರಿಯ ನ್ಯಾಯವಾದಿ ಅರುಣ್ ಶ್ಯಾಂ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದರು

ಈ ಮನವಿಗೆ ಸ್ಪಂದಿಸಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು 2026ರ ಅಕ್ಟೋಬರ್ 7ರಂದು ಪತ್ರದ ಮೂಲಕ ಪ್ರತಿಕ್ರಿಯಿಸಿ, ಈ ಕುರಿತು ಸಂಬಂಧಪಟ್ಟ ರೈಲ್ವೆ ನಿರ್ದೇಶನಾಲಯಕ್ಕೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಅಕ್ಟೋಬರ್ 30ರಂದು ರೈಲ್ವೆ ಮಂಡಳಿಯು ಅಧಿಕೃತ ಆದೇಶ ಹೊರಡಿಸಿದ್ದು, 26655/26656 ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಜಂಕ್ಷನ್ ಮಾರ್ಗವಾಗಿ ಓಡಿಸಲು ಹಾಗೂ ಕಬಕ ಪುತ್ತೂರು ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ವಾಣಿಜ್ಯ ನಿಲುಗಡೆ ಕಲ್ಪಿಸಲು ಅನುಮೋದನೆ ನೀಡಿದೆ.

ರೈಲಿನ ವೇಳಾಪಟ್ಟಿ ಹೀಗಿದೆ:

ಯಶವಂತಪುರದಿಂದ ಹೊರಡುವ ರೈಲು ಕಬಕ ಪುತ್ತೂರಿಗೆ ಮಧ್ಯಾಹ್ನ 1.25ಕ್ಕೆ ಆಗಮಿಸಿ 1.27ಕ್ಕೆ ನಿರ್ಗಮಿಸಲಿದೆ.
– ಮಡಗಾಂವ್‌ನಿಂದ ಬರುವ ರೈಲು ಕಬಕ ಪುತ್ತೂರಿಗೆ ಮಧ್ಯಾಹ್ನ 2.43ಕ್ಕೆ ಆಗಮಿಸಿ 2.45ಕ್ಕೆ ನಿರ್ಗಮಿಸಲಿದೆ. ಈ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದ್ದು, ಯಶವಂತಪುರದಿಂದ ಬುಧವಾರ ಹಾಗೂ ಮಡಗಾಂವ್‌ನಿಂದ ಗುರುವಾರ ಸಂಚಾರ ಇರುವುದಿಲ್ಲ ಎಂದು ರೈಲ್ವೆ ಮಂಡಳಿಯ ಆದೇಶದಲ್ಲಿ ತಿಳಿಸಲಾಗಿದೆ. ಕಬಕ ಪುತ್ತೂರು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ ದೊರೆಯುವುದರಿಂದ ಪುತ್ತೂರು, ಸುಳ್ಯ, ಕಡಬ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ವೇಗದ ಮತ್ತು ಆರಾಮದಾಯಕ ರೈಲು ಪ್ರಯಾಣದ ಅವಕಾಶ ಲಭಿಸಲಿದೆ. ಬೆಂಗಳೂರಿಗೆ ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದಲೂ ಈ ನಿರ್ಧಾರ ಮಹತ್ವ ಪಡೆದಿದೆ. ಜನರ ಬಹುಕಾಲದ ಬೇಡಿಕೆಯನ್ನು ರೈಲ್ವೆ ಸಚಿವಾಲಯದ ಗಮನಕ್ಕೆ ತಂದು, ಸಚಿವರ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನ ನಡೆಸಿದ ಹಿರಿಯ ನ್ಯಾಯವಾದಿ ಅರುಣ್ ಶ್ಯಾಂ ಅವರ ಕಾರ್ಯಕ್ಕೆ ಇದೀಗ ಫಲ ದೊರೆತಂತಾಗಿದೆ. ಈ ನಿರ್ಧಾರಕ್ಕೆ ಪುತ್ತೂರು ಭಾಗದ ರೈಲು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

You may also like

Leave a Reply