ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಗಣೇಶ ಮಂದಿರದ ಚಪ್ಪರ ತೆರವು ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಜೋಡುಕಲ್ಲು ಪ್ರದೇಶದಲ್ಲಿ ಕಳೆದ 39 ವರ್ಷಗಳಿಂದ ಗಣೇಶೋತ್ಸವ ಹಾಗೂ ಅಷ್ಟಮಿ ಆಚರಣೆಗಳಿಗೆ ಬಳಕೆಯಾಗುತ್ತಿದ್ದ ಚಪ್ಪರವನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಸೂಚನೆ ನೀಡಿರುವುದು ಹಿಂದೂ ಸಂಘಟನೆಗಳು ಹಾಗೂ ಭಕ್ತರ ಹೋರಾಟಕ್ಕೆ ಕಾರಣವಾಗಿದೆ.

ಚಪ್ಪರ ತೆರವಿಗೆ ಮುಂದಾದ ಲೋಕೋಪಯೋಗಿ ಇಲಾಖೆಯ ಕ್ರಮವನ್ನು ವಿರೋಧಿಸಿ ಕಳೆದ 12 ದಿನಗಳಿಂದ ಭಕ್ತರು ಭಜನೆ, ಹೋಮ ಸೇರಿದಂತೆ ನಿರಂತರ ಧಾರ್ಮಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಜೋಡುಕಲ್ಲಿನ ಗಣೇಶ ಮಂದಿರದ ಚಪ್ಪರ ಇರುವ ಜಾಗ ಸರ್ಕಾರಿ ಜಾಗವೆಂದು ಆಕ್ಷೇಪ ವ್ಯಕ್ತಪಡಿಸಿ ಮುಸ್ಲಿಂ ಲೀಗ್ ಮುಖಂಡರೊಬ್ಬರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಚಪ್ಪರ ತೆರವಿಗೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದರೂ, ಸ್ಥಳೀಯ ಹಿಂದೂ ಸಂಘಟನೆಗಳು ಹಾಗೂ ಭಕ್ತರ ತೀವ್ರ ವಿರೋಧದಿಂದಾಗಿ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿಲ್ಲ. ಸುಮಾರು ನಾಲ್ಕು ದಶಕಗಳಿಂದ ಇದೇ ಸ್ಥಳದಲ್ಲಿ ಚಪ್ಪರ ನಿರ್ಮಿಸಿ ಗಣೇಶೋತ್ಸವ ಹಾಗೂ ಅಷ್ಟಮಿ ಆಚರಿಸಿಕೊಂಡು ಬರಲಾಗುತ್ತಿದೆ. ಇಷ್ಟು ವರ್ಷಗಳಿಂದ ನಡೆದುಕೊಂಡು ಬಂದ ಧಾರ್ಮಿಕ ಪರಂಪರೆಗೆ ಏಕಾಏಕಿ ಕಾನೂನು ಸಂಕಷ್ಟ ಎದುರಾಗಿರುವುದೇಕೆ ಎಂಬ ಪ್ರಶ್ನೆಯನ್ನು ಹಿಂದೂ ಸಂಘಟನೆಗಳು ಎತ್ತಿವೆ. ಕೇವಲ ಒಂದು ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಕಟ್ಟಡದ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸರ್ಕಾರಿ ಜಾಗದಲ್ಲಿರುವ ಎಲ್ಲ ಅನಧಿಕೃತ ಕಟ್ಟಡಗಳ ವಿರುದ್ಧವೂ ಸಮಾನವಾಗಿ ಕಾನೂನು ಜಾರಿಯಾಗಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.

ಕಾಸರಗೋಡಿನ ಇತರ ಪ್ರದೇಶಗಳಲ್ಲಿರುವ ಧಾರ್ಮಿಕ ಹಾಗೂ ವಿವಿಧ ಸಂಘಟನೆಗಳಿಗೆ ಸಂಬಂಧಿಸಿದ ಅನಧಿಕೃತ ಕಟ್ಟಡಗಳ ವಿಚಾರವನ್ನೂ ಪ್ರಸ್ತಾಪಿಸಿರುವ ಪ್ರತಿಭಟನಾಕಾರರು, ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಒಂದು ಸಮುದಾಯದ ಕಟ್ಟಡಕ್ಕೆ ಮಾತ್ರ ಕಾನೂನು ಅನ್ವಯಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇರಳದ ಗಡಿಭಾಗದಲ್ಲಿ ಆರಂಭವಾದ ಈ ವಿವಾದ ಇದೀಗ ಕರ್ನಾಟಕ ಕರಾವಳಿಯಲ್ಲೂ ರಾಜಕೀಯ ಹಾಗೂ ಧಾರ್ಮಿಕ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದ ಬಿಜೆಪಿ ನಾಯಕರುಗಳಾದ ಸಿ.ಟಿ.ರವಿ, ಪ್ರತಾಪ್ ಸಿಂಹ, ಶಾಸಕ ಭರತ್ ಶೆಟ್ಟಿ ಸೇರಿದಂತೆ ಹಲವು ನಾಯಕರ ಗಮನವನ್ನೂ ಜೋಡುಕಲ್ಲಿನ ಬೆಳವಣಿಗೆ ಸೆಳೆದಿದೆ.

ಕೇರಳದ ಹಿಂದೂ ಸಂಘಟನೆಗಳ ಹೋರಾಟಕ್ಕೆ ಕರ್ನಾಟಕದ ಕರಾವಳಿಯಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ವಿವಾದವು ಸ್ಥಳೀಯ ಮಟ್ಟದಲ್ಲಿ ಆರ್ಎಸ್ಎಸ್ ಹಾಗೂ ಮುಸ್ಲಿಂ ಲೀಗ್ ನಡುವಿನ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ. ಚಪ್ಪರ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗುತ್ತಿದ್ದಂತೆ ಭಕ್ತರು ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದ್ದಾರೆ. ಕಳೆದ 12 ದಿನಗಳಿಂದ ನಿರಂತರವಾಗಿ ಭಜನೆ, ಹೋಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಚಪ್ಪರ ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೂ ಭಕ್ತರ ವಿರೋಧದ ಹಿನ್ನೆಲೆಯಲ್ಲಿ ತೆರವು ಪ್ರಕ್ರಿಯೆ ಪೂರ್ಣಗೊಳಿಸಲಾಗದೆ ಹಿಂದಿರುಗುವಂತಾಗಿದೆ. ಈನಡುವೆ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮುಂದುವರಿಸಲು ಗಣೇಶ ಮಂದಿರ ಉಳಿಸಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ನಡೆಸುವುದಾಗಿ ಸಂಘಟನೆಗಳು ತಿಳಿಸಿವೆ.

ಹಿಂದೂಗಳ ಧಾರ್ಮಿಕ ನಂಬಿಕೆ ವಿರುದ್ಧ ಮುಸ್ಲಿಂ ಲೀಗ್ ಷಡ್ಯಂತ್ರ: ಕುಂಟಾರು ರವೀಶ್ ತಂತ್ರಿ ಆರೋಪ
ಗಡಿನಾಡು ಕಾಸರಗೋಡಿನಲ್ಲಿ ಗಣೇಶ ಮಂದಿರದ ಚಪ್ಪರ ತೆರವು ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಉದ್ದೇಶದಿಂದ ಮುಸ್ಲಿಂ ಲೀಗ್ ಷಡ್ಯಂತ್ರ ನಡೆಸುತ್ತಿದೆ ಎಂದು ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿ ಅಧ್ಯಕ್ಷ ಕುಂಟಾರು ರವೀಶ್ ತಂತ್ರಿ ಆರೋಪಿಸಿದ್ದಾರೆ. ಗಣೇಶ ಮಂದಿರದ ಚಪ್ಪರವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗಣೇಶ ಮಂದಿರದ ಚಪ್ಪರಕ್ಕೂ ಮುಸ್ಲಿಂ ಲೀಗ್ಗೂ ಯಾವುದೇ ಸಂಬಂಧವಿಲ್ಲ. ಆದರೂ ನಮ್ಮ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕಾಸರಗೋಡಿನಲ್ಲಿ ಸರ್ಕಾರಿ ಜಾಗದಲ್ಲಿ ಅನೇಕ ಕಟ್ಟಡಗಳಿವೆ. ಈ ಬಗ್ಗೆ ದಾಖಲೆಗಳಿದ್ದರೂ ನಾವು ಎಲ್ಲಿಯೂ ಪ್ರಶ್ನೆ ಮಾಡಿಲ್ಲ. ಮಸೀದಿಗಳು, ಕಮಾನುಗಳು ಹಾಗೂ ಮುಸ್ಲಿಂ ಲೀಗ್ ಕಟ್ಟಡಗಳೂ ಸರ್ಕಾರಿ ಜಾಗದಲ್ಲಿವೆ. ಆದರೆ ನಾವು ಎಂದಿಗೂ ಇತರರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ. ಇದು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದ್ದು, ಜನರ ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ್ದಾಗಿದೆ. ನಮ್ಮ ಹೋರಾಟ ಕೇರಳ ಹೈಕೋರ್ಟ್ ಆದೇಶದ ವಿರುದ್ಧವಲ್ಲ. ಬದಲಾಗಿ, ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮದ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಕೇರಳ ಹೈಕೋರ್ಟ್ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದೇವೆ. ಇದೇ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿಯೂ ವ್ಯಾಜ್ಯ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಣೇಶ ಮಂದಿರದಲ್ಲಿ ನಡೆಯುತ್ತಿರುವ ಭಜನೆ, ಹೋಮ-ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹೋರಾಟ ಮುಂದುವರಿಯಲಿದೆ. ಇಡೀ ಕಾಸರಗೋಡು ಮಾತ್ರವಲ್ಲದೆ ಕರಾವಳಿಯ ಹಿಂದೂ ಸಮಾಜವೂ ನಮ್ಮ ಬೆಂಬಲಕ್ಕೆ ಬರುತ್ತಿದೆ. ಕಳೆದ ಹನ್ನೊಂದು ದಿನಗಳಿಂದ ಸಾವಿರಾರು ಹಿಂದೂಗಳು ಇಲ್ಲಿಗೆ ಆಗಮಿಸಿ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಚಪ್ಪರ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಕುಂಟಾರು ರವೀಶ್ ತಂತ್ರಿ ಎಚ್ಚರಿಕೆ ನೀಡಿದ್ದಾರೆ.
