ಮಂಗಳೂರು: ಸುರತ್ಕಲ್ನ ಹೊಸಬೆಟ್ಟು ಬೀಚ್ನಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣದ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಸೋಮನಾಥ (48) ಅವರ ಸಾವಿನ ಪ್ರಕರಣ ಇದೀಗ ಸಿಐಡಿ ತನಿಖೆಗೆ ವಹಿಸಲಾಗಿದೆ. ಸೋಮನಾಥ ಆತ್ಮಹತ್ಯೆ ಪ್ರಕರಣದ ಜೊತೆಗೆ ಬೀಚ್ನಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣ ಹಾಗೂ ಪೊಲೀಸ್ ದೌರ್ಜನ್ಯದ ಆರೋಪದ ಪ್ರಕರಣವನ್ನೂ ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಮೂರು ಪ್ರಕರಣಗಳನ್ನು ಸಿಐಡಿಗೆ ಹಸ್ತಾಂತರಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಪ್ರಕರಣಗಳ ಕಡತಗಳನ್ನು ಸಿಐಡಿಗೆ ಹಸ್ತಾಂತರಿಸುವಂತೆ ಮಂಗಳೂರು ಪೊಲೀಸ್ ಕಮಿಷನರ್ಗೆ ಸೂಚಿಸಲಾಗಿದೆ.
ಅಕ್ಟೋಬರ್ 27ರಂದು ಸೋಮನಾಥ (48) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಕ್ಟೋಬರ್ 25ರ ರಾತ್ರಿ ಮಂಗಳೂರಿನ ಹೊಸಬೆಟ್ಟು ಬೀಚ್ ಬಳಿ ಮುಂಬೈ ಮೂಲದ ಯುವತಿ ಹಾಗೂ ಕೇರಳ ಮೂಲದ ಯುವಕನನ್ನು ಪ್ರಶ್ನಿಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪ ಸೋಮನಾಥ ಸೇರಿದಂತೆ ಕೆಲವರ ಮೇಲಿತ್ತು. ಅಮಲು ಪದಾರ್ಥ ಸೇವಿಸಿ ತಮ್ಮನ್ನು ಪ್ರಶ್ನಿಸಿ ಕಿರುಕುಳ ನೀಡಲಾಗಿದೆ ಎಂದು ಜೋಡಿ ಪೊಲೀಸರಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗೆ ನೋಟಿಸ್ ನೀಡಿ ಕಳುಹಿಸಿದ್ದರು ಎನ್ನಲಾಗಿದೆ.
ಈ ಬೆಳವಣಿಗೆಯಿಂದ ಮನನೊಂದಿದ್ದ ಸೋಮನಾಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್ ನೋಟ್ನಲ್ಲಿ, ‘ನನ್ನ ಸಾವಿಗೆ ನಾನೇ ಕಾರಣ. ನಾನು ಮಾಡಿದ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ.
ಆದರೆ, ಸೋಮನಾಥ ಅವರ ಸಾವಿನ ಹಿಂದೆ ಪೊಲೀಸ್ ದೌರ್ಜನ್ಯವಿದೆ ಎಂದು ಆರೋಪಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದರು. ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದ್ದರು. ಸೂಕ್ತ ತನಿಖೆ ನಡೆಸದಿದ್ದರೆ ಬೃಹತ್ ಹೋರಾಟ ನಡೆಸುವುದಾಗಿ ಮೊಗವೀರ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮೂರು ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿದೆ. ಸೋಮನಾಥ ಅವರ ಆತ್ಮಹತ್ಯೆಗೆ ಕಾರಣವೇನು? ಪೊಲೀಸ್ ದೌರ್ಜನ್ಯದ ಆರೋಪದಲ್ಲಿ ಸತ್ಯಾಂಶವಿದೆಯೇ? ಹೊಸಬೆಟ್ಟು ಬೀಚ್ನಲ್ಲಿ ನಡೆದ ಘಟನೆಯ ಸಂಪೂರ್ಣ ಹಿನ್ನೆಲೆ ಏನು? ಎಂಬ ಅಂಶಗಳು ಸಿಐಡಿ ತನಿಖೆಯಲ್ಲಿ ಪರಿಶೀಲನೆಗೆ ಒಳಪಡಲಿವೆ.
