ಮಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಹೊಯ್ಸಳ ವಾಹನವನ್ನು ಬಳಸಿಕೊಂಡು ಸಾರ್ವಜನಿಕರಿಂದ ಹಣ ಸುಲಿಗೆ ಮಾಡಿದ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ವಿರುದ್ಧ ತನಿಖೆ ಮುಂದುವರಿದಿದೆ.

ವಿಟ್ಲ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ರವಿರಾಜ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರವಿರಾಜ್ ಅವರು ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಹೊಯ್ಸಳ ವಾಹನದಲ್ಲಿ ಬಂದ ಪೊಲೀಸ್ ಸಿಬ್ಬಂದಿ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ಅವರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಅವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಕಸಿದುಕೊಂಡು, ಮೊಬೈಲ್ ಕವರ್ನಲ್ಲಿದ್ದ 300 ರೂಪಾಯಿ ಹಣವನ್ನು ತೆಗೆದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದಾದ ಮರುದಿನವೂ ಹೊಯ್ಸಳ ವಾಹನದಲ್ಲಿ ಬಂದಿದ್ದ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ಮತ್ತೆ ರವಿರಾಜ್ ಅವರನ್ನು ತಡೆದು ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರ ಮೊಬೈಲ್ ಕವರ್ನಲ್ಲಿದ್ದ ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ನ ಎರಡು ಎಟಿಎಂ ಕಾರ್ಡ್ಗಳು, 1,000 ರೂಪಾಯಿ ನಗದು ಹಾಗೂ ಮೋಟಾರ್ ಸೈಕಲ್ ಕೀ ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ, ಮೊಬೈಲ್ನ ಪಾಸ್ವರ್ಡ್ ಪಡೆದು ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್ ಪರಿಶೀಲಿಸಿ ಹಣ ಸುಲಿಗೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. 2,000 ರೂಪಾಯಿ ನೀಡುವಂತೆ ಒತ್ತಾಯಿಸಿ, ಹಣ ನೀಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಇನ್ನು ಉಮನಾಥ್ ಎಂಬ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ರವಿರಾಜ್ ಅವರ ಬೈಕ್ ಸೀಝ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಬಲವಂತವಾಗಿ ನಗದು ಹಣ ಪಡೆದಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ರವಿರಾಜ್ ನೀಡಿದ ದೂರಿನ ಮೇರೆಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ಸೂಚನೆಯ ಬೆನ್ನಲ್ಲೇ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ಅವರನ್ನು ಬಂಧಿಸಲಾಗಿದೆ.
ಬಂಧಿತ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಉಮನಾಥ್ ವಿರುದ್ಧ ತನಿಖೆ ಮುಂದುವರಿದಿದೆ.
ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಸಮವಸ್ತ್ರ ಮತ್ತು ಹೊಯ್ಸಳ ವಾಹನದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸುಲಿಗೆಗೆ ಇಳಿದಿದ್ದಾರೆ ಎಂಬ ಆರೋಪ ಪೊಲೀಸ್ ಇಲಾಖೆಯೊಳಗೆ ತೀವ್ರ ಚರ್ಚೆಗೆ ಕಾರಣವಾಗಿದೆ.
