Home ಉದ್ಯೋಗದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಹೈಡ್ರಾಮಾ!

ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಹೈಡ್ರಾಮಾ!

by diksoochikannada.com

ಮಂಗಳೂರು: ಮಂಗಳೂರು ದಸರಾ ಸಂಭ್ರಮದ ನಡುವೆಯೇ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ಆಯೋಜಿಸಿದ ವಿಚಾರ ಮಂಗಳೂರಿನ ಬೆಂದೂರ್‌ವೆಲ್ ಬಳಿಯ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ದಸರಾ ರಜೆ ನೀಡದೆ ಪರೀಕ್ಷೆ ನಡೆಸಲು ಮುಂದಾದ ಕಾಲೇಜು ಆಡಳಿತದ ಕ್ರಮವನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆಯಿಂದಲೇ ಕಾಲೇಜು ಗೇಟ್ ಎದುರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಂಬಲ ನೀಡಿದ್ದು, ಸ್ಥಳದಲ್ಲಿ ಪೊಲೀಸರೊಂದಿಗೆ ಹಲವು ಬಾರಿ ವಾಗ್ವಾದ ಹಾಗೂ ನೂಕಾಟ-ತಳ್ಳಾಟ ನಡೆದಿದೆ.

ಕಾಲೇಜಿನಲ್ಲಿ ಅಕ್ಟೋಬರ್ 12ರಿಂದ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಮಂಗಳೂರು ದಸರಾ ಆಚರಣೆಯಲ್ಲಿ ಭಾಗವಹಿಸಲು ಪರೀಕ್ಷೆಗಳು ಅಡ್ಡಿಯಾಗಲಿವೆ ಎಂಬುದು ವಿದ್ಯಾರ್ಥಿಗಳ ಆಕ್ಷೇಪವಾಗಿತ್ತು. ಪರೀಕ್ಷೆ ಮುಂದೂಡುವಂತೆ ಕಾಲೇಜು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾದರು. ಈ ಸಂಬಂಧ ವಿದ್ಯಾರ್ಥಿ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೂ ದೂರು ನೀಡಿದ್ದವು.

ಪೊಲೀಸರೊಂದಿಗೆ ವಾಗ್ವಾದ, ರಸ್ತೆ ತಡೆ

ಬೆಳಗ್ಗೆ ಕಾಲೇಜು ಗೇಟ್ ಎದುರು ಜಮಾಯಿಸಿದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಪೊಲೀಸ್ ಜೀಪ್‌ಗೆ ಅಡ್ಡ ನಿಂತ ವಿದ್ಯಾರ್ಥಿನಿಯರು, ಎಬಿವಿಪಿ ನಾಯಕರನ್ನು ಬಂಧಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಕೆಲವು ವಿದ್ಯಾರ್ಥಿಗಳು ಪೊಲೀಸ್ ಜೀಪ್ ಎದುರು ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಸ್ತೆ ತಡೆಗೂ ಮುಂದಾದ ವಿದ್ಯಾರ್ಥಿಗಳು, ಬಂಧಿತ ವಿದ್ಯಾರ್ಥಿ ನಾಯಕರನ್ನು ಬಿಡುಗಡೆ ಮಾಡುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಘೋಷಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ಡಿಸಿಪಿ ಸ್ಯಾಮ್ ವರ್ಗೀಸ್ ಅವರು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ಕಾನೂನು ಉಲ್ಲಂಘಿಸಿದರೆ ವಿದ್ಯಾರ್ಥಿಗಳ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ವಿದ್ಯಾರ್ಥಿಗಳ ಸಮಸ್ಯೆಯನ್ನು ಕಾಲೇಜು ಆಡಳಿತದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಆದರೂ ಎಬಿವಿಪಿ ನಾಯಕರ ಬಿಡುಗಡೆಗೆ ಆಗ್ರಹಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ಮುಂದುವರಿಸಿದರು.

ನಂತರ ಪೊಲೀಸರು ಎಬಿವಿಪಿ ವಿದ್ಯಾರ್ಥಿ ನಾಯಕರನ್ನು ವಶಕ್ಕೆ ಪಡೆದು ಕರೆದೊಯ್ದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜು ಗೇಟ್ ಎದುರು ಕುಳಿತು ಪ್ರತಿಭಟನೆ ಮುಂದುವರಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆಯೂ ಕಾಲೇಜು ಆಡಳಿತ ಪರೀಕ್ಷೆ ನಡೆಸಲು ಮುಂದಾಗಿದ್ದು, ಪರೀಕ್ಷೆ ಮುಂದೂಡುವುದಿಲ್ಲ ಎಂಬ ನಿಲುವು ತಳೆದಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಹಲವು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೆ ವಂಚಿತರಾದರು.

ಠಾಣೆಗೆ ಶಾಸಕರ ಭೇಟಿ

ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಹಾಗೂ ಕಿಶೋರ್ ಪುತ್ತೂರು ಅವರು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ವಶಕ್ಕೆ ಪಡೆದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ ಶಾಸಕರು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಇದೇ ವೇಳೆ ಕಾಲೇಜು ಗೇಟ್ ಬಳಿ ವಿದ್ಯಾರ್ಥಿಗಳು ವಾಹನ ಸಂಚಾರಕ್ಕೆ ಅಡ್ಡಿಪಡಿಸಲು ಮುಂದಾದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಮತ್ತೆ ವಾಗ್ವಾದ ನಡೆಯಿತು. ಎಬಿವಿಪಿ ಕಾರ್ಯಕರ್ತರು ಸ್ಥಳಕ್ಕೆ ಮರಳಿದ ಬಳಿಕ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತು.

ಐದು ದಿನಗಳ ರಜೆಗೆ ಕಾಲೇಜು ಸಮ್ಮತಿ

ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೊನೆಗೂ ಕಾಲೇಜು ಆಡಳಿತ ಭಾಗಶಃ ಬೇಡಿಕೆಗೆ ಸ್ಪಂದಿಸಿತು. ಅಕ್ಟೋಬರ್ 19 ಮತ್ತು 22ರಂದು ನಿಗದಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಯಿತು. ಅಕ್ಟೋಬರ್ 18, 20 ಮತ್ತು 21ರಂದು ಸರ್ಕಾರಿ ರಜೆ ಇರುವುದರಿಂದ ಒಟ್ಟು ಐದು ದಿನಗಳ ಕಾಲ ರಜೆ ದೊರೆಯುವಂತೆ ವ್ಯವಸ್ಥೆ ಮಾಡಲು ಕಾಲೇಜು ಆಡಳಿತ ಸಮ್ಮತಿಸಿತು.

ಕಾಲೇಜಿನ ಪರೀಕ್ಷಾಂಗ ಮುಖ್ಯಸ್ಥೆ ಹಾಗೂ ರಿಜಿಸ್ಟ್ರಾರ್ ಶುಭರೇಖಾ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಮಾಹಿತಿ ನೀಡಿದರು. ಆದರೆ ಈ ಭರವಸೆಯಿಂದ ತೃಪ್ತರಾಗದ ವಿದ್ಯಾರ್ಥಿಗಳು, ಈ ವಾರ ಹಾಗೂ ಮುಂದಿನ ವಾರದ ಪರೀಕ್ಷೆಗಳನ್ನೂ ಸಂಪೂರ್ಣವಾಗಿ ಮುಂದೂಡಬೇಕು ಎಂದು ಆಗ್ರಹಿಸಿದರು. ಹೀಗಾಗಿ ಪ್ರತಿಭಟನೆ ಮುಂದುವರಿಯಿತು.

ಎಬಿವಿಪಿ ಕಾರ್ಯಕರ್ತನಿಗೆ ಕಪಾಳಮೋಕ್ಷ ಆರೋಪ

ಮಧ್ಯಾಹ್ನದ ವೇಳೆಗೆ ಪ್ರತಿಭಟನಾ ಸ್ಥಳದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಎಸಿಪಿ ರವೀಶ್ ನಾಯ್ಕ್ ಅವರು ಓರ್ವ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಸ್ಥಳದಲ್ಲಿದ್ದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಠಾಣೆಗೆ ಕರೆದೊಯ್ದರು.

ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಬಳಿಕವೂ ವಿದ್ಯಾರ್ಥಿನಿಯರು ಪ್ರತಿಭಟನೆ ಕೈಬಿಡದೆ ಕಾಲೇಜು ಗೇಟ್ ಎದುರು ಧರಣಿ ಮುಂದುವರಿಸಿದರು. ಪರೀಕ್ಷೆ ಮುಂದೂಡಿಕೆ ವಿಚಾರದಲ್ಲಿ ಕಾಲೇಜು ಆಡಳಿತದ ನಿಲುವು ಮತ್ತು ಪೊಲೀಸರ ಕ್ರಮದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಮುಂದುವರಿದಿದೆ.

ದಸರಾ ರಜೆ, ಸೆಮಿಸ್ಟರ್ ಪರೀಕ್ಷೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಯ ವಿಚಾರವಾಗಿ ಆರಂಭವಾದ ವಿವಾದವು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಕಾಲೇಜು ಆಡಳಿತದ ಭಾಗಶಃ ನಿರ್ಧಾರದ ನಡುವೆಯೂ ಉಳಿದ ಪರೀಕ್ಷೆಗಳ ಮುಂದೂಡಿಕೆಗೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು, ಪ್ರತಿಭಟನೆಯ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

You may also like

Leave a Reply