Home ಅಂಕಣಗಳುಮಂಗಳೂರಿಗೆ ಸೌಜನ್ಯ ಎಸ್ಐಟಿ ಟೀಂ ಎಂಟ್ರಿ: ತನಿಖೆಗೆ ಅಧಿಕೃತ ಚಾಲನೆ!

ಮಂಗಳೂರಿಗೆ ಸೌಜನ್ಯ ಎಸ್ಐಟಿ ಟೀಂ ಎಂಟ್ರಿ: ತನಿಖೆಗೆ ಅಧಿಕೃತ ಚಾಲನೆ!

by diksoochikannada.com

ಮಂಗಳೂರು: ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಕೊನೆಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕೃತವಾಗಿ ಕಾರ್ಯಾರಂಭಿಸಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದು, ಇದೀಗ ತನಿಖಾ ತಂಡದ ಹಿರಿಯ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ಪ್ರಾಥಮಿಕ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ.

ಎಸ್‌ಐಟಿಯ ಮುಖ್ಯಸ್ಥ ಶಶಿಕುಮಾರ್, ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಹಾಗೂ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಸಾರ್ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದರು. ಬಳಿಕ ಬೆಳ್ತಂಗಡಿಗೆ ತೆರಳಿದ ಅಧಿಕಾರಿಗಳು ಎಸ್‌ಐಟಿ ಕಚೇರಿ ಸೇರಿದಂತೆ ತನಿಖೆಗೆ ಅಗತ್ಯವಿರುವ ವ್ಯವಸ್ಥೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ನಂತರ ಮಂಗಳೂರಿನಲ್ಲೂ ಎಸ್‌ಐಟಿ ಕಚೇರಿ ವ್ಯವಸ್ಥೆಯನ್ನು ಪರಿಶೀಲಿಸಿದರು.

16 ಮಂದಿ ಅಧಿಕಾರಿಗಳು, ಸಿಬ್ಬಂದಿ ಜೊತೆ ಸಭೆ

ಸ್ಥಳ ಪರಿಶೀಲನೆಯ ಬಳಿಕ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರನ್ನು ಭೇಟಿ ಮಾಡಿದ ಇಬ್ಬರು ಐಪಿಎಸ್ ಅಧಿಕಾರಿಗಳು ಕೆಲಕಾಲ ಮಹತ್ವದ ಚರ್ಚೆ ನಡೆಸಿದರು. ಬಳಿಕ ಸೌಜನ್ಯ ಪ್ರಕರಣದ ತನಿಖೆಗಾಗಿ ನೇಮಕಗೊಂಡಿರುವ 16 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಎಸ್ಐಟಿ ಮುಖ್ಯಸ್ಥ ಶಶಿಕುಮಾರ್ ಹಾಜರಿದ್ದರು. ತನಿಖೆಯನ್ನು ಯಾವ ರೀತಿಯಲ್ಲಿ ಮುಂದುವರಿಸಬೇಕು, ಯಾವ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ತನಿಖೆಯ ಆರಂಭಿಕ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್, ಐಪಿಎಸ್ ಅವರ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ತನಿಖಾ ತಂಡ ಕಾರ್ಯನಿರ್ವಹಿಸಲಿದೆ.

ಮಂಗಳೂರು, ಬೆಳ್ತಂಗಡಿಯಲ್ಲಿ ಎರಡು ಕಚೇರಿ!

ಸೌಜನ್ಯ ಪ್ರಕರಣದ ತನಿಖೆಗಾಗಿ ಮಂಗಳೂರು ಹಾಗೂ ಬೆಳ್ತಂಗಡಿಯಲ್ಲಿ ಎರಡು ಎಸ್‌ಐಟಿ ಕಚೇರಿಗಳು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ಹಿಂದೆ ಸಂಸದರ ಕಚೇರಿ ಇದ್ದ ಸ್ಥಳದಲ್ಲಿ ಸದ್ಯ ವಿಶೇಷ ಕಾರ್ಯಪಡೆ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಇದೇ ಸ್ಥಳದಲ್ಲಿ ಎಸ್‌ಐಟಿಯ ತಾಂತ್ರಿಕ ವಿಭಾಗ ಹಾಗೂ ದಾಖಲೆಗಳ ಪರಿಶೀಲನೆ ಸೇರಿದಂತೆ ಕೆಲವು ಪ್ರಮುಖ ಕಾರ್ಯಗಳು ನಡೆಯಲಿವೆ ಎನ್ನಲಾಗಿದೆ. ಇನ್ನು ಬೆಳ್ತಂಗಡಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಧರ್ಮಸ್ಥಳ ಬುರುಡೆ ಪ್ರಕರಣದ ಎಸ್‌ಐಟಿ ಕಚೇರಿಯಲ್ಲೇ ಸೌಜನ್ಯ ಪ್ರಕರಣದ ಎಸ್‌ಐಟಿ ತಂಡಕ್ಕೂ ಅಗತ್ಯ ಸ್ಥಳಾವಕಾಶ ಕಲ್ಪಿಸುವ ಸಾಧ್ಯತೆ ಇದೆ. ಇಲ್ಲಿ ಸಾಕ್ಷಿಗಳ ವಿಚಾರಣೆ ಸೇರಿದಂತೆ ಸ್ಥಳೀಯ ಮಟ್ಟದ ತನಿಖಾ ಚಟುವಟಿಕೆಗಳು ನಡೆಯಲಿವೆ ಎನ್ನಲಾಗಿದೆ.

ಮೂರು ತಿಂಗಳಲ್ಲಿ ವರದಿ!

14 ವರ್ಷಗಳ ಹಿಂದಿನ ಸೌಜನ್ಯ ಪ್ರಕರಣದ ಮರುತನಿಖೆಗೆ ಇದೀಗ ಅಧಿಕೃತ ಚಾಲನೆ ದೊರೆತಿರುವ ಹಿನ್ನೆಲೆಯಲ್ಲಿ ತನಿಖಾ ತಂಡದ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಹಿಂದಿನ ತನಿಖೆಯ ವಿವರಗಳು, ಸಾಕ್ಷ್ಯಗಳು ಹಾಗೂ ವಿವಿಧ ಆಯಾಮಗಳನ್ನು ಪರಿಶೀಲಿಸುವ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ತಂಡಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ ಎನ್ನಲಾಗಿದೆ. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್ ಕೂಡ ಮಂಗಳೂರಿಗೆ ಆಗಮಿಸಿ ತನಿಖೆಯ ಮುಂದಿನ ರೂಪುರೇಷೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. 14 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುತನಿಖೆಯ ಮೂಲಕ ಹೊಸ ತಿರುವು ಸಿಗುತ್ತದೆಯೇ? ತನಿಖಾ ತಂಡ ನಿಜವಾದ ಅಪರಾಧಿಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಗಳು ಇದೀಗ ಮತ್ತೆ ಮುನ್ನೆಲೆಗೆ ಬಂದಿವೆ.

You may also like

Leave a Reply