Home Blogಧರ್ಮಸ್ಥಳ ಬುರುಡೆ ಕೇಸ್: 1,510 ದಫನ, 1,480 ಯುಡಿಆರ್: 30 ಪ್ರಕರಣಗಳ ದಾಖಲೆ ವ್ಯತ್ಯಾಸ ಪತ್ತೆ!

ಧರ್ಮಸ್ಥಳ ಬುರುಡೆ ಕೇಸ್: 1,510 ದಫನ, 1,480 ಯುಡಿಆರ್: 30 ಪ್ರಕರಣಗಳ ದಾಖಲೆ ವ್ಯತ್ಯಾಸ ಪತ್ತೆ!

by diksoochikannada.com

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ವರದಿಯಲ್ಲಿ ಮಹತ್ವದ ದಾಖಲೆ ವ್ಯತ್ಯಾಸಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

Oplus_16908288

ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ 1998ರಿಂದ 2014ರ ಅವಧಿಯಲ್ಲಿ ದಾಖಲಾಗಿರುವ ಅಸಹಜ ಸಾವು (ಯುಡಿಆರ್) ಪ್ರಕರಣಗಳ ದಾಖಲೆಗಳನ್ನು ಪರಿಶೀಲಿಸಿದ ವೇಳೆ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಠಾಣೆಯ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಸ್‌ಐಟಿ ಪರಿಶೀಲನೆಯ ಪ್ರಕಾರ, ಧರ್ಮಸ್ಥಳ ಗ್ರಾಮ ಪಂಚಾಯಿತಿಯ ದಾಖಲೆಗಳಲ್ಲಿ 1,510 ಮೃತದೇಹಗಳನ್ನು ದಫನ ಮಾಡಿರುವ ಮಾಹಿತಿ ಇದೆ ಎನ್ನಲಾಗಿದೆ. ಆದರೆ ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳಲ್ಲಿ 1,480 ಯುಡಿಆರ್ ಪ್ರಕರಣಗಳ ದಾಖಲೆಗಳು ಮಾತ್ರ ಪತ್ತೆಯಾಗಿವೆ ಎಂದು ಹೇಳಲಾಗಿದೆ.
ಹೀಗಾಗಿ ಎರಡೂ ದಾಖಲೆಗಳ ನಡುವೆ 30 ಪ್ರಕರಣಗಳ ವ್ಯತ್ಯಾಸ ಕಂಡುಬಂದಿರುವುದು ತನಿಖಾ ತಂಡದ ಗಮನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

Oplus_16908288

1998ರಿಂದ 2014ರ ನಡುವಿನ ಸುಮಾರು 16 ವರ್ಷಗಳ ಅವಧಿಯ ಮೃತದೇಹ ಪತ್ತೆ ಹಾಗೂ ದಫನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೋಲಿಕೆ ಮಾಡಲಾಗಿದ್ದು, ಯುಡಿಆರ್ ಪ್ರಕರಣಗಳ ದಾಖಲೆಗಳು ಹಾಗೂ ಪಂಚಾಯಿತಿ ಮಟ್ಟದಲ್ಲಿ ನಿರ್ವಹಿಸಲಾಗಿರುವ ದಫನ ದಾಖಲೆಗಳಲ್ಲಿ ವೈರುಧ್ಯ ಕಂಡುಬಂದಿದೆ ಎನ್ನಲಾಗಿದೆ.
ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ
ಈ ಹಿನ್ನೆಲೆಯಲ್ಲಿ ಎಸ್‌ಐಟಿ ವರದಿಯಲ್ಲಿ ಉಲ್ಲೇಖವಾಗಿರುವ ಅಂಶಗಳ ಕುರಿತು ಮಾಹಿತಿ ಪಡೆದುಕೊಂಡಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.

Oplus_16908288


ಹೊಸದಾಗಿ ಬೆಳಕಿಗೆ ಬಂದಿರುವ ಈ ದಾಖಲೆ ವ್ಯತ್ಯಾಸಗಳು ಪ್ರಸ್ತುತ ಎಸ್‌ಐಟಿಗೆ ನೀಡಲಾಗಿರುವ ತನಿಖಾ ಆದೇಶದ ವ್ಯಾಪ್ತಿಗೆ ಸ್ವಯಂಚಾಲಿತವಾಗಿ ಸೇರುವುದಿಲ್ಲ. ಹೀಗಾಗಿ ಈ ಹೊಸ ಅಂಶಗಳನ್ನೂ ಎಸ್‌ಐಟಿ ತನಿಖೆಯ ವ್ಯಾಪ್ತಿಗೆ ಒಳಪಡಿಸಲು ಸರ್ಕಾರದಿಂದ ಸೂಕ್ತ ಆದೇಶ ಹೊರಡಿಸುವ ಅಗತ್ಯವಿದೆ ಎಂದು ಮಹಿಳಾ ಆಯೋಗ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.
ಮೂಲ ದಾಖಲೆಗಳ ರಕ್ಷಣೆಗೆ ಸೂಚನೆ
ತನಿಖೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳು, ರಿಜಿಸ್ಟರ್‌ಗಳು, ಯುಡಿಆರ್ ದಾಖಲೆಗಳು ಹಾಗೂ ವೈದ್ಯಕೀಯ ವರದಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ಸಂಬಂಧಪಟ್ಟ ಆಡಳಿತಕ್ಕೆ ಸೂಕ್ತ ನಿರ್ದೇಶನ ನೀಡುವಂತೆಯೂ ಮಹಿಳಾ ಆಯೋಗವು ಮುಖ್ಯ ಕಾರ್ಯದರ್ಶಿಗೆ ಪತ್ರದಲ್ಲಿ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಧರ್ಮಸ್ಥಳ ವ್ಯಾಪ್ತಿಯಲ್ಲಿ ಹಲವು ವರ್ಷಗಳ ಅವಧಿಗೆ ಸಂಬಂಧಿಸಿದ ಪೊಲೀಸ್ ಮತ್ತು ಪಂಚಾಯಿತಿ ದಾಖಲೆಗಳ ನಡುವೆ ಕಂಡುಬಂದಿರುವ ಈ ವ್ಯತ್ಯಾಸವನ್ನು ಮುಂದಿನ ತನಿಖೆಯಲ್ಲಿ ಪರಿಶೀಲಿಸುವ ಅಗತ್ಯವಿದೆ ಎಂಬ ಅಂಶವೂ ಪತ್ರದಲ್ಲಿ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಈ ಮೂಲಕ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಯಲ್ಲಿ ಹಳೆಯ ಯುಡಿಆರ್ ದಾಖಲೆಗಳು ಮತ್ತು ಸ್ಥಳೀಯ ಸಂಸ್ಥೆಗಳ ದಫನ ದಾಖಲೆಗಳ ನಡುವಿನ ಹೊಂದಾಣಿಕೆ ಮತ್ತೊಂದು ಪ್ರಮುಖ ಪರಿಶೀಲನಾ ವಿಷಯವಾಗಿ ಹೊರಹೊಮ್ಮಿದೆ.

You may also like

Leave a Reply