Home Blogಸೌಜನ್ಯ ಕೇಸ್ ಮರು ತನಿಖೆಯಲ್ಲಿ ಎಸ್ಐಟಿ ಎಚ್ಚರಿಕೆ ಹೆಜ್ಜೆ: 14 ವರ್ಷಗಳ ಬಳಿಕವೂ ಕ್ರೈಂ ಸೀನ್ ಮರು ಸೃಷ್ಟಿ!

ಸೌಜನ್ಯ ಕೇಸ್ ಮರು ತನಿಖೆಯಲ್ಲಿ ಎಸ್ಐಟಿ ಎಚ್ಚರಿಕೆ ಹೆಜ್ಜೆ: 14 ವರ್ಷಗಳ ಬಳಿಕವೂ ಕ್ರೈಂ ಸೀನ್ ಮರು ಸೃಷ್ಟಿ!

by diksoochikannada.com

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ ಈ ಬಾರಿ ಯಾವುದೇ ತಪ್ಪುಗಳು ಆಗದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ‌ಸಿಬಿಐ, ಸಿಐಡಿಯಂಥ ತನಿಖಾ ಸಂಸ್ಥೆಗಳು ಮಾಡಿದ ಯಡವಟ್ಡುಗಳು ಮರುಕಳಿಸದಂತೆ ತನಿಖೆಯಲ್ಲಿ ನಿಯಮ ಪಾಲನೆಗೆ ಮುಂದಾಗಿದೆ. ಹೀಗಾಗಿ ಅಂದು ಸೌಜನ್ಯ ಮೃತದೇಹ ಪತ್ತೆಯಾಗಿದ್ದ ಸ್ಥಳದಲ್ಲಿ ಶುಕ್ರವಾರ ಮಹಜರು ನಡೆಸಿದ್ದು, 14 ವರ್ಷಗಳ ಹಿಂದಿನ ಘಟನೆಯ ಕ್ರೈಂ ಸೀನ್ ಮರುಸೃಷ್ಟಿ ಮಾಡಲಾಗಿದೆ.

Oplus_16908288

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪ ನೇತ್ರಾವತಿ ನದಿ ಬಳಿಯ ಮಣ್ಣಸಂಕದ ಕಾಡಿನಲ್ಲಿ ಈ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಎಸ್‌ಐಟಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಆರಂಭಿಸಿದ ಬಳಿಕ ಎಸ್‌ಐಟಿ ತನಿಖಾಧಿಕಾರಿ ಲೋಕೇಶ್ ಜಗಲ್ಸಾರ್ ಐಪಿಎಸ್ ಕೂಡ ಸ್ಥಳಕ್ಕೆ ಆಗಮಿಸಿ ಮಹಜರು ಪ್ರಕ್ರಿಯೆಯಲ್ಲಿ ನಡೆಸಿದ್ರು.

Oplus_16908288

ಸೌಜನ್ಯ ಮೃತದೇಹವನ್ನು ಮೊದಲಿಗೆ ನೋಡಿದ್ದ ಆಕೆಯ ಸಂಬಂಧಿ ಹಾಗೂ ಪ್ರಕರಣದ ಅಂದಿನ ದೂರುದಾರ ಪುರಂದರ ಗೌಡ ಮತ್ತು ಸಂಬಂಧಿ ತುಕರಾಮ್ ಗೌಡ ಅವರನ್ನು ಎಸ್‌ಐಟಿ ಸ್ಥಳಕ್ಕೆ ಕರೆಸಿಕೊಂಡು, ಅಂದಿನ ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿತು. ಮೃತದೇಹ ಪತ್ತೆಯಾದ ಸ್ಥಳ, ಅಂದಿನ ಭೌಗೋಳಿಕ ಪರಿಸ್ಥಿತಿ ಹಾಗೂ ಮೃತದೇಹ ಕಂಡುಬಂದ ಸಂದರ್ಭದ ಕುರಿತು ಪುರಂದರ ಗೌಡರಿಂದ ಮಾಹಿತಿ ಪಡೆಯಲಾಯಿತು. ಮಹಜರು ಪ್ರಕ್ರಿಯೆಗೂ ಮುನ್ನ ಎಸ್‌ಐಟಿ ಅಧಿಕಾರಿಗಳು ಪಿಡಬ್ಲ್ಯುಡಿ ಎಂಜಿನಿಯರ್‌ಗಳು, ಎಸ್‌ಒಸಿಒ (SOCO) ತಂಡ ಹಾಗೂ ಧರ್ಮಸ್ಥಳ ಪೊಲೀಸರೊಂದಿಗೆ ಸಭೆ ನಡೆಸಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು.

Oplus_16908288

ಬಳಿಕ ಕ್ರೈಂ ಸೀನ್ ಸುತ್ತಲೂ ಪೊಲೀಸ್ ಟೇಪ್ ಅಳವಡಿಸಿ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪ್ರಕ್ರಿಯೆಯಲ್ಲಿ ಭಾಗವಹಿಸುವವರಿಗೆ ಮಾತ್ರ ಸ್ಥಳ ಪ್ರವೇಶಕ್ಕೆ ಅವಕಾಶ ನೀಡಲಾಯಿತು.
ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯದ (FSL) ಸಿಬ್ಬಂದಿ, ಎಸ್‌ಒಸಿಒ ತಂಡ, ಗ್ರಾಮ ಆಡಳಿತಾಧಿಕಾರಿ, ಪಂಚರು, ವೈದ್ಯರು ಹಾಗೂ ಛಾಯಾಚಿತ್ರ ಮತ್ತು ವಿಡಿಯೋಗ್ರಫಿ ತಂಡವೂ ಸ್ಥಳದಲ್ಲಿ ಹಾಜರಿತ್ತು. ತನಿಖೆಯ ಭಾಗವಾಗಿ ಅಂದು ಮೃತದೇಹ ಪತ್ತೆಯಾದ ಜಾಗದ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿ ಕ್ರೈಂ ಸೀನ್ ಮರುಸೃಷ್ಟಿ ಮಾಡಲಾಯಿತು. ಇದೇ ವೇಳೆ ಸ್ಥಳದ ಮಣ್ಣನ್ನು ಎಸ್‌ಐಟಿ ತಂಡ ಸಂಗ್ರಹಿಸಿತು. ಇದಕ್ಕಾಗಿ ಸಿಬ್ಬಂದಿ ಗುದ್ದಲಿಯನ್ನೂ ಸ್ಥಳಕ್ಕೆ ತಂದಿದ್ದರು. ಘಟನಾ ಸ್ಥಳದ ಮಣ್ಣು ಸೇರಿದಂತೆ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಹಜರು ಮತ್ತು ಪರಿಶೀಲನಾ ಕಾರ್ಯ ಮುಂದುವರಿದಿದ್ದು, 14 ವರ್ಷಗಳ ಹಿಂದಿನ ಘಟನೆಯ ಸ್ಥಳದ ಪರಿಸ್ಥಿತಿ, ಅಂದಿನ ದೂರುದಾರರ ಹೇಳಿಕೆ ಹಾಗೂ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಮರುಪರಿಶೀಲಿಸುವ ನಿಟ್ಟಿನಲ್ಲಿ ಎಸ್‌ಐಟಿ ಈ ಕ್ರಮ ಕೈಗೊಂಡಿದೆ. ಹಳೆಯ ತನಿಖೆಯಲ್ಲಿ ನಡೆದಿರಬಹುದಾದ ಲೋಪಗಳು, ಅಂದಿನ ಘಟನೆಯ ವಾಸ್ತವಿಕ ಚಿತ್ರಣ ಮತ್ತು ಲಭ್ಯವಿರುವ ಸಾಕ್ಷ್ಯಗಳ ನಡುವಿನ ಹೊಂದಾಣಿಕೆಯನ್ನು ಪರಿಶೀಲಿಸುವುದು ಮರುತನಿಖೆಯ ಪ್ರಮುಖ ಭಾಗವಾಗಿದೆ ಎನ್ನಲಾಗಿದೆ.
ಒಟ್ಟಾರೆ 14 ವರ್ಷಗಳ ಬಳಿಕ ಸ್ಥಳ ಮಹಜರು ಮತ್ತು ವಿಧಿವಿಜ್ಞಾನ ಪರಿಶೀಲನೆಯಿಂದ ತನಿಖೆಗೆ ಯಾವ ರೀತಿಯ ಹೊಸ ಮಾಹಿತಿ ಲಭ್ಯವಾಗಲಿದೆ ಅನ್ನೋದು ಬೇರೆ ಪ್ರಶ್ನೆ. ಆದರೆ ತನಿಖಾ ಹಂತಗಳಲ್ಲಿ ಯಾವುದೇ ತಪ್ಪುಗಳಾಗದಂತೆ ಎಸ್ಐಟಿ ತಂಡ ಸೂಕ್ಷ್ಮ ಹೆಜ್ಜೆ ಇಟ್ಟಿದ್ದು, ಅಗತ್ಯ ಕ್ರಮಗಳ ಮೂಲಕ ತನಿಖೆ ಆರಂಭಿಸಿದೆ.

You may also like

Leave a Reply