ಮಂಗಳೂರು: ಮಂಗಳೂರು ಹೊರವಲಯದ Mangalore Refinery and Petrochemicals Limited (MRPL) ಘಟಕದಲ್ಲಿ ಸಂಭವಿಸಿದ ಭಾರೀ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
MRPL ಮುಖ್ಯಸ್ಥರು ಹಾಗೂ ಕೋಕರ್ ಹೈಡ್ರೋ ಯುನಿಟ್‌ನ ಮುಖ್ಯಸ್ಥರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ 287, 125(ಬಿ) ಹಾಗೂ 106 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
MRPL ಘಟಕದಲ್ಲಿ ಉದ್ಯೋಗಿಗಳಿಗೆ ಊಟ ಪೂರೈಸುವ ಕ್ಯಾಟರಿಂಗ್ ಸಿಬ್ಬಂದಿ ರವಿ ಪೂಜಾರಿ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸ್ಫೋಟದ ಘಟನೆಯಲ್ಲಿ ಮನೀಶ್ ಎಂಬ ಸಿಬ್ಬಂದಿ ಮೃತಪಟ್ಟಿದ್ದು, ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಘಟಕದಲ್ಲಿ ಅಗ್ನಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಸ್ಫೋಟದ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.
54 ಮನೆಗಳಿಗೆ ಹಾನಿ!
ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭಾರೀ ಹಾನಿಯಾಗಿರುವುದು ವರದಿಯಾಗಿದೆ. ಒಟ್ಟು 54 ಮನೆಗಳಿಗೆ ಹಾನಿಯಾಗಿದೆ.
ಜೋಕಟ್ಟೆ: 25 ಮನೆಗಳು
ಕಳವಾರು ಗ್ರಾಮ: 19 ಮನೆಗಳು
ಬಾಳ ಗ್ರಾಮ: 10 ಮನೆಗಳು
ಇದರ ಜೊತೆಗೆ 8 ಪ್ರಾರ್ಥನಾ ಮಂದಿರಗಳಿಗೂ ಹಾನಿಯಾಗಿದೆ.
ಜೋಕಟ್ಟೆ: 5 ಪ್ರಾರ್ಥನಾ ಮಂದಿರಗಳು
ಕಳವಾರು: 3 ಪ್ರಾರ್ಥನಾ ಮಂದಿರಗಳು
ಸ್ಫೋಟದಿಂದ ಉಂಟಾದ ಹಾನಿಯ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಘಟನೆಯ ಹೊಣೆಗಾರಿಕೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.
