ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಸೌಹಾರ್ದ ಹಾಳುಮಾಡುವವರ ವಿರುದ್ದ ಕ್ರಮಕ್ಕೆ ರಚನೆಯಾಗಿರುವ ಸ್ಪೆಷಲ್ ಆಕ್ಷನ್ ಫೋರ್ಸ್ (SAF) ಫುಲ್ ಆಕ್ಟಿವ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ಆಶಿಕ್ ಎಸ್ ಕೋಟ್ಯಾನ್ ಎಂಬ ಯುವಕನನ್ನು ಬಂಧಿಸಲಾಗಿದೆ. ಆರೋಪಿಯು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ನಮಗೆ ಯಾವುದೇ ರೀತಿಯ ಉತ್ತರಗಳು ಬೇಡ, ರಕ್ತಕ್ಕೆ ರಕ್ತವೇ ಉತ್ತರವಾಗಬೇಕು.. ಜೀವಕ್ಕೆ ಜೀವವೇ ಬೇಕು” ಎಂದು ಮಾರಕಾಯುಧಗಳ ಚಿಹ್ನೆಗಳೊಂದಿಗೆ ಪ್ರಚೋದನಕಾರಿ ಸ್ಟೇಟಸ್ ಹಾಕಿದ್ದನು.

ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (BNS) ಕಲಂ 196, 353(2), 351(3) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಆಶಿಕ್ ಎಸ್ ಕೋಟ್ಯಾನ್‌ನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇಂತಹ ಪ್ರಚೋದನಾಕಾರಿ ಚಟುವಟಿಕೆಗಳ ವಿರುದ್ಧ ಸಾರ್ವಜನಿಕರ ಜಾಗೃತಿ ಹಾಗೂ ಸಹಕಾರದಿಂದಲೇ ಶಾಂತಿ-ಸುವ್ಯವಸ್ಥೆ ಕಾಪಾಡಬಹುದೆಂದು ಪೊಲೀಸರು ತಿಳಿಸಿದ್ದಾರೆ. ಕರಾವಳಿಯಲ್ಲಿ SAF ತೀವ್ರ ನಿಗಾವಹಿಸಿದ್ದು, ಸೋಶಿಯಲ್ ಮೀಡಿಯಾ ಮೇಲೆ ಕಣ್ಣಿಟ್ಟಿದೆ.