Home ಕರಾವಳಿಮದ್ರಸಾದಲ್ಲೇ ‘ಪ್ರೇಮ ಪಾಠ’: ವಿವಾಹಿತ ಧರ್ಮಗುರು ಜೊತೆ ಓಡಿಬಂದ ಯುವತಿ: ಕೊಣಾಜೆ ಠಾಣೆಯಲ್ಲಿ ಕಣ್ಣೀರಿಟ್ಟ ಹೆತ್ತವರು!

ಮದ್ರಸಾದಲ್ಲೇ ‘ಪ್ರೇಮ ಪಾಠ’: ವಿವಾಹಿತ ಧರ್ಮಗುರು ಜೊತೆ ಓಡಿಬಂದ ಯುವತಿ: ಕೊಣಾಜೆ ಠಾಣೆಯಲ್ಲಿ ಕಣ್ಣೀರಿಟ್ಟ ಹೆತ್ತವರು!

by diksoochikannada.com

ಮಂಗಳೂರು: ಮದ್ರಸಾದಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ ಯುವತಿಯೊಂದಿಗೆ ಪ್ರೇಮ ಸಂಬಂಧ ಬೆಳೆಸಿದ ಆರೋಪ ವಿವಾಹಿತ ಧರ್ಮಗುರುವೊಬ್ಬರ ವಿರುದ್ಧ ಕೇಳಿಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ 22 ವರ್ಷದ ಯುವತಿ ಮಂಗಳೂರಿನ 40 ವರ್ಷದ ಧರ್ಮಗುರು ಜೊತೆ ತೆರಳಿದ್ದಾಳೆ.

ಯುವತಿ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಮಗಳನ್ನು ಹುಡುಕಿಕೊಂಡು ಮಂಗಳೂರಿಗೆ ಆಗಮಿಸಿದ್ದು, ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ಕಣ್ಣೀರಿಟ್ಟಿದ್ದಾರೆ. ಯುವತಿ ವಯಸ್ಕಳಾಗಿರುವ ಕಾರಣ ಪೊಲೀಸರು ಯುವತಿ ಹಾಗೂ ಧರ್ಮಗುರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೋಷಕರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಯುವತಿ ಅವರೊಂದಿಗೆ ವಾಪಸ್ ಹೋಗಲು ನಿರಾಕರಿಸಿ, ಧರ್ಮಗುರು ಜೊತೆ ತೆರಳುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಬಳಿಕ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿ ಆತನ ಜೊತೆ ತೆರಳಿದ್ದು, ಕಣ್ಣೆದುರೇ ಮಗಳು ಹೋಗುವುದನ್ನು ಕಂಡ ಪೋಷಕರು ಠಾಣೆಯ ಆವರಣದಲ್ಲೇ ಕಣ್ಣೀರಿಟ್ಟಿದ್ದಾರೆ.

ಕುಮಟಾದ ಮದ್ರಸಾದಲ್ಲಿ ಹಲವು ವರ್ಷಗಳ ಕಾಲ ಧರ್ಮಗುರುವಾಗಿ ಕೆಲಸ ಮಾಡಿದ್ದ ಆತ ಯುವತಿ ಜೊತೆ ಕಳೆದ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಬಳಿಕ ಕುಮಟಾದ ಮದ್ರಸಾ ತೊರೆದು ಮುಂಬೈಗೆ ತೆರಳಿದ್ದ ಆತ ಇತ್ತೀಚೆಗೆ ಮತ್ತೆ ಬಂದು ಅಕ್ಟೋಬರ್ 22ರಂದು ಯುವತಿಯನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿಯೊಂದಿಗೆ ನಿಖಾ ಮಾಡಿಕೊಂಡು ನೋಂದಣಿಯನ್ನೂ ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ವಿವಾಹವಾಗಿದ್ದು, ಮಕ್ಕಳನ್ನೂ ಹೊಂದಿರುವ ಅತ ತನ್ನ ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ಮೈಂಡ್ ವಾಶ್ ಮಾಡಿದ್ದಾರೆ ಎಂಬುದು ಪೋಷಕರ ಆರೋಪ. ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಯುವತಿಯೊಂದಿಗೆ ನಂಟು ಬೆಳೆಸಿಕೊಂಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಬೆಳವಣಿಗೆಯಿಂದ ಆಕ್ರೋಶಗೊಂಡಿರುವ ಯುವತಿಯ ಕುಟುಂಬಸ್ಥರು, ಧರ್ಮ ಗುರುವನ್ನು ಮುಸ್ಲಿಂ ಸಮಾಜದಿಂದ ಬಹಿಷ್ಕರಿಸಬೇಕು ಹಾಗೂ ಯಾವುದೇ ಮದ್ರಸಾದಲ್ಲಿ ಧರ್ಮಗುರುವಾಗಿ ನೇಮಕ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

You may also like

Leave a Reply