Home ಉದ್ಯೋಗಸೌಜನ್ಯ ಮರುತನಿಖೆ: SIT ಮುಖ್ಯಸ್ಥ ಶಶಿಕುಮಾರ್ ಬದಲಾವಣೆ ಸಾಧ್ಯತೆ!

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗುವ ಸಾಧ್ಯತೆ ಇದೆ. SIT ಮುಖ್ಯಸ್ಥರಾಗಿರುವ ಐಜಿಪಿ ಎನ್. ಶಶಿಕುಮಾರ್ ಅವರನ್ನು ಇಂದು ಜವಾಬ್ದಾರಿಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಅವರ ಸ್ಥಾನಕ್ಕೆ ನೂತನ ಅಧಿಕಾರಿಯ ನೇಮಕವಾಗುವ ನಿರೀಕ್ಷೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು SIT ಜವಾಬ್ದಾರಿಯಿಂದ ತಮ್ಮನ್ನು ಹೊರಗಿಡುವಂತೆ ಐಜಿಪಿ ಎನ್. ಶಶಿಕುಮಾರ್ ಅವರು ಈ ಹಿಂದೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಶಿಕುಮಾರ್, ತಮ್ಮ ಮನವಿಯನ್ನು ಶೀಘ್ರವಾಗಿ ಪುರಸ್ಕರಿಸುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬೆಳವಣಿಗೆಯ ಬೆನ್ನಲ್ಲೇ, ಇಂದು ಶಶಿಕುಮಾರ್ ಅವರನ್ನು SIT ಮುಖ್ಯಸ್ಥ ಸ್ಥಾನದಿಂದ ಬಿಡುಗಡೆ ಮಾಡಿ, ನೂತನ ಮುಖ್ಯಸ್ಥರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಐಜಿಪಿ ಲಾಬುರಾಮ್ ಅಥವಾ ಚೇತನ್ ಸಿಂಗ್ ರಾಥೋಡ್ ಅವರಲ್ಲಿ ಒಬ್ಬರು ನೂತನ SIT ಮುಖ್ಯಸ್ಥರಾಗಿ ನೇಮಕಗೊಳ್ಳಬಹುದು ಎಂಬ ಚರ್ಚೆ ನಡೆಯುತ್ತಿದೆ.

ಇದೇ ವೇಳೆ, SITಯಲ್ಲಿರುವ ಎಎಸ್ಪಿ ವೆಂಕಟೇಶ್ ಪ್ರಸನ್ನ ಅವರನ್ನೂ ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರ ಸ್ಥಾನಕ್ಕೆ ಎಸಿಪಿ ಶ್ರೀನಿಧಿ ಅವರನ್ನು ನೇಮಕ ಮಾಡುವ ಸಾಧ್ಯತೆ ಕುರಿತು ಕೂಡ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸೌಜನ್ಯ ಪ್ರಕರಣದ ಮರುತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ತನಿಖಾ ತಂಡದ ಪ್ರಮುಖ ಅಧಿಕಾರಿಗಳ ಬದಲಾವಣೆಯ ಸಾಧ್ಯತೆ ಮಹತ್ವ ಪಡೆದುಕೊಂಡಿದೆ. ಆದರೆ, ಈ ನೇಮಕಾತಿ ಹಾಗೂ ವರ್ಗಾವಣೆಗಳ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

You may also like

Leave a Reply