Home ಕರಾವಳಿಸೌಜನ್ಯ ಕೇಸ್ ತನಿಖೆ ಬೆನ್ನಲ್ಲೇ ಎಸ್ಐಟಿಗೆ ದೂರು ನೀಡಿದ ಧರ್ಮಸ್ಥಳ ಗ್ರಾಮಸ್ಥ: ತನಿಖೆಯ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ ಎಂದ ಸುಧೀರ್ ರೆಡ್ಡಿ!

ಸೌಜನ್ಯ ಕೇಸ್ ತನಿಖೆ ಬೆನ್ನಲ್ಲೇ ಎಸ್ಐಟಿಗೆ ದೂರು ನೀಡಿದ ಧರ್ಮಸ್ಥಳ ಗ್ರಾಮಸ್ಥ: ತನಿಖೆಯ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ ಎಂದ ಸುಧೀರ್ ರೆಡ್ಡಿ!

by diksoochikannada.com

ಮಂಗಳೂರು: ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಎಂಬವರು ಮಂಗಳೂರಿನ ಎಸ್‌ಐಟಿ ಕಚೇರಿಗೆ ತೆರಳಿ ಸೌಜನ್ಯ ಮತ್ತು ಕುಸುಮಾವತಿ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಸುವಂತೆ ಹಲವು ಪುಟಗಳ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ. 2015ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ಇಂದಿರಾವತಿ ಎಂಬವರಿಗೆ ಜಮೀನು ಮಂಜೂರಾಗಿರುವುದು, ಪ್ರಸ್ತುತ ಆ ಜಮೀನು ಕುಸುಮಾವತಿ ಅವರ ಹೆಸರಿನಲ್ಲಿ ಸ್ವಾಧೀನದಲ್ಲಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಇಂದಿರಾವತಿ ಅವರ ಇರುವಿಕೆಯ ಬಗ್ಗೆ ಅನುಮಾನಗಳಿವೆ ಎಂದು ಕಿಶೋರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂಬುದಕ್ಕೆ ಸಂಬಂಧಿಸಿದ ಪ್ರಮಾಣಪತ್ರದ ಸತ್ಯಾಸತ್ಯತೆ, ಆಧಾರ್ ಮತ್ತು ಪಡಿತರ ಚೀಟಿ ದಾಖಲೆಗಳಲ್ಲಿನ ವ್ಯತ್ಯಾಸಗಳು ಸೇರಿದಂತೆ ವಿವಿಧ ಅಂಶಗಳ ಪರಿಶೀಲನೆಗೆ ಅವರು ಮನವಿ ಮಾಡಿದ್ದಾರೆ. ಸೌಜನ್ಯ ಮತ್ತು ಆಕೆಯ ಸಹೋದರಿ ಸೌಮ್ಯ ಅವರ ಜನನ, ಕುಟುಂಬದ ದಾಖಲೆಗಳು ಹಾಗೂ ತಾಯಿಯ ಹೆಸರಿನ ಕುರಿತು ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಬೇಕು ಎಂದೂ ಕೋರಿದ್ದಾರೆ. ಜಮೀನಿನ ವಿಚಾರ ಹಾಗೂ ಸೌಜನ್ಯ ಅವರ ಮಾವ ವಿಠಲ ಗೌಡರ ಬಗ್ಗೆಯೂ ತನಿಖೆ ನಡೆಸುವಂತೆ ಕಿಶೋರ್ ಮನವಿ ಮಾಡಿರುವುದಾಗಿ ತಿಳಿದುಬಂದಿದೆ. ಈ ಹಿಂದೆ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರಿಗೂ ಈ ಸಂಬಂಧ ದೂರು ಸಲ್ಲಿಸಿದ್ದಾಗಿ ಅವರು ತಿಳಿಸಿದ್ದಾರೆ. ಸೌಜನ್ಯ ಪ್ರಕರಣದ ಮರುತನಿಖೆಯ ನಡುವೆಯೇ ತಾಯಿ-ಮಗಳ ಸಂಬಂಧದ ಕುರಿತು ದೂರು ಸಲ್ಲಿಕೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಆದರೆ ಸೌಜನ್ಯ ತಾಯಿ ವಿಚಾರದ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಎಸ್‌ಐಟಿ ತಂಡದ ಸದಸ್ಯ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಎಸ್‌ಐಟಿಗೆ ಯಾವುದೇ ರೀತಿಯ ಅನುಮಾನಗಳಿಲ್ಲ. ಪ್ರಕರಣದ ತನಿಖೆಯ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ ಹಾಗೂ ಪ್ರಕರಣಕ್ಕೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ತನಿಖೆ ನಡೆಸುವುದಿಲ್ಲ ಎಂದಿದ್ದಾರೆ.

You may also like

Leave a Reply