ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯ ಭಾಗವಾಗಿ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಪೊಲೀಸ್ ಅಧಿಕಾರಿಗಳ ವಿಚಾರಣೆ ಮಂಗಳೂರಿನ ಎಸ್‌ಐಟಿ ಕಚೇರಿಯಲ್ಲಿ ನಡೆಯುತ್ತಿದೆ. ವಿಚಾರಣೆಯ ಹಿನ್ನೆಲೆಯಲ್ಲಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಎಸ್‌ಐಟಿ ಕಚೇರಿಗೆ ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಭಾಸ್ಕರ್ ರೈ, ಸಿಐಡಿಯ ಅಂದಿನ ಡಿವೈಎಸ್‌ಪಿ ರುದ್ರಮುನಿ ಹಾಗೂ ಅಂದಿನ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಯೋಗೇಶ್ ವಿಚಾರಣೆಗೆ ಆಗಮಿಸಿದ್ದಾರೆ.

ಸೌಜನ್ಯ ಪ್ರಕರಣದ ತನಿಖಾಧಿಕಾರಿಯಾಗಿದ್ದ ಭಾಸ್ಕರ್ ರೈ ಹಾಗೂ ಇತರ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದು, ಪ್ರಕರಣದ ಹಿಂದಿನ ತನಿಖೆಗೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದೆ.
ವಿಚಾರಣೆಗೆ ದಾಖಲೆಗಳೊಂದಿಗೆ ಹಾಜರ್!
ವಿಚಾರಣೆಗೆ ಆಗಮಿಸಿದ ಮಾಜಿ ಪೊಲೀಸ್ ಅಧಿಕಾರಿಗಳು ಹಲವು ಫೈಲ್‌ಗಳನ್ನು ತಮ್ಮೊಂದಿಗೆ ತಂದಿರುವುದು ಕಂಡುಬಂದಿದೆ. ಭಾಸ್ಕರ್ ರೈ ಮತ್ತು ರುದ್ರಮುನಿ ಕೆಲವು ಫೈಲ್‌ಗಳನ್ನು ತಂದಿದ್ದರೆ, ಯೋಗೇಶ್ ಒಂದೆರಡು ನೋಟ್‌ಬುಕ್‌ಗಳೊಂದಿಗೆ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ. ಈ ದಾಖಲೆಗಳು ಪ್ರಕರಣಕ್ಕೆ ಸಂಬಂಧಿಸಿದವುಗಳಾಗಿರಬಹುದೆಂಬ ಸಾಧ್ಯತೆಯಿದ್ದರೂ, ಅವುಗಳಲ್ಲಿರುವ ಮಾಹಿತಿಯ ಕುರಿತು ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.
ಎಸ್‌ಐಟಿ ಕಚೇರಿ ಸುತ್ತ ಬಿಗಿ ಭದ್ರತೆ
ತನಿಖಾಧಿಕಾರಿಗಳ ವಿಚಾರಣೆ ಹಿನ್ನೆಲೆಯಲ್ಲಿ ಎಸ್‌ಐಟಿ ಕಚೇರಿ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಿ ಅನಗತ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಎಸ್‌ಐಟಿ ತಂಡದ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಹತ್ತಕ್ಕೂ ಹೆಚ್ಚು ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಿಂದಲೂ ಹೆಚ್ಚುವರಿ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸೌಜನ್ಯ ಪ್ರಕರಣದ ಹಿಂದಿನ ತನಿಖೆ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯ ದೃಷ್ಟಿಯಿಂದ ಅಂದಿನ ತನಿಖಾಧಿಕಾರಿಗಳ ವಿಚಾರಣೆ ಮಹತ್ವ ಪಡೆದಿದೆ. ವಿಚಾರಣೆಯಲ್ಲಿ ಯಾವ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬುದು ಮುಂದಿನ ಬೆಳವಣಿಗೆಗಳಿಂದ ಸ್ಪಷ್ಟವಾಗಬೇಕಿದೆ.
